ಮುರುಗೋಡು ಕೃಷ್ಣದಾಸರು
(1923- ). ದಾಸಪರಂಪರೆಯಲ್ಲಿ ಜೀವನ ಸಾಗಿಸಿ, ಹರಿದಾಸ ಭಕ್ತ ಸಾಹಿತ್ಯ ಪ್ರಚಾರಕ್ಕೆ ಜೀವನ ಮುಡುಪಾಗಿಟ್ಟ ಕಲಾವಿದರು. ಕೃಷúರಾಯರು ಹುಟ್ಟಿದ್ದು ಬೆಳಗಾವಿ ಜಿಲ್ಲೆಯ ಮುರುಗೋಡಿನಲ್ಲಿ ಮೇ16, 1927ರಂದು. ತಂದೆ ಭೀಮರಾಯರು, ತಾಯಿ ರಂಗೂಬಾಯಿ. ಧಾರ್ಮಿಕ ಸಂಪ್ರದಾಯಸ್ಥರ ಮನೆತನ. ಬೆಳಗಾವಿ ಧಾರವಾಡಗಳಲ್ಲಿ ವಿದ್ಯಾಭ್ಯಾಸ ಮಾಡಿ ಮುಲ್ಕಿ ಪರೀಕ್ಷೆ ಮುಗಿಸಿದರು. ಮೂರುವರ್ಷ ಇಂಗ್ಲೀಷ್ ಭಾಷಾಧ್ಯಯನದಲ್ಲಿ ನಡೆಯಿತು. ಸಂಗೀತದಲ್ಲಿ ಆಕರ್ಷಣೆ. ಪುಣೆಯ ಗಂಧರ್ವ ವಿದ್ಯಾಲಯಕ್ಕೆ ಸೇರಿ ಉತ್ತರಾದಿ ಸಂಗೀತದಲ್ಲಿ ಅಧ್ಯಯನ. ಗುರು ಪುಲಸ್ಕರ್ ಅವರಿಂದ ಮೆಚ್ಚುಗೆ ಪಡೆದ ವಿದ್ಯಾರ್ಥಿ. ಹುಬ್ಬಳ್ಳಿಯಲ್ಲಿ ಮಹಾಲಿಂಗರಾವ್ ಅವರಲ್ಲಿ ಸಂಗೀತಾಭ್ಯಾಸದ ಮುಂದುವರಿಕೆ. ಸಾಗರ ಕಟ್ಟೆ ಸ್ವಾಮಿಗಳ ಬಳಿ ಶಾಸ್ತ್ರಾಧ್ಯಯನ. ಆರಂಭದಲ್ಲಿ ಸಂಚಾರಿಯಾಗಿ ಸಂಗೀತ ಕಛೇರಿ, ನಂತರ ಶಾಲಾ ಕಾಲೇಜುಗಳಲ್ಲಿ - ಸನ್ಮಾನ ಪುರಸ್ಕಾರಗಳು. ಈ ಮಧ್ಯೆ ಆರು ತಿಂಗಳ ಕಾಲ ತಿರುಪತಿಯಲ್ಲಿ ಕೀರ್ತನೆ ಸೇವೆ. ವ್ಯಾಸರಾಜಮಠದ ಯತಿಗಳಾದ ಲಕ್ಷ್ಮೀಂದ್ರ ತೀರ್ಥರಿಂದ ದಾಸದೀಕ್ಷೆ ಒಡೆದ ಕೃಷ್ಣರಾಯರು, ಕೃಷ್ಣದಾಸರಾದರು. ಶರಣ್ಯ ವಿಠಲ ಅಂಕಿತ ನಾಮದಲ್ಲಿ ಸ್ವಂತಕೃತಿಗಳ ರಚಿಸಿ, ಭಜನಚಂದ್ರಿಕೆ ಎಂಬ ಕೃತಿ ರಚನೆ. ಹಲವಾರು ಮುದ್ರಣ ಕಂಡಿರುವ ಭಜನಚಂದ್ರಿಕೆ 60,000 ಪ್ರತಿಗಳು ಮಾರಾಟವಾಗಿವೆ. 

ಮುರಗೋಡು ಕೃಷ್ಣದಾಸರು ಸಂಗೀತ ಕಛೆರಿ ಎಂದರೆ, ಭಜನೆ ಕಾರ್ಯಕ್ರಮ. ವರ್ಷಕ್ಕೆ ಕನಿಷ್ಠ 200 ಕಾರ್ಯಕ್ರಮಗಳಾದರೂ ನಡೆಯುತ್ತವೆ. ಇದೀಗ ಅವರಿಗೆ 80 ವಯಸ್ಸು. ಆದರೂ ಅವರ ಕಂಠ ಸಿರಿ ಕಂಠ. ಸಂಗೀತದ ಬನಿ ಕುಂಠಿಲ್ಲ. ಇಳಿ ವಯಸ್ಸಿನಲ್ಲಿ ಭಜನೆ, ಸಂಗೀತಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡು ಹರೆಯದ ಉತ್ಸಾಹದಿಂದ ದುಡಿಯುತ್ತಿದ್ದಾರೆ. ಈ 80ರ ಉತ್ಸಾಹಿ ದಾಸರಿಗೆ ಕರ್ನಾಟಕ ಸರಕಾರ 2004ರ ಸಂತಶಿಶುನಾಳ ಶರೀಫ ಪ್ರಶಸ್ತಿ ನೀಡಿ ಗೌರವಿಸಿದೆ.   								

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ